ಮಾರ್ಗರೇಟ್ ಆಳ್ವಾ ‘ಫೋನ್ ಟಾಪ್’ ಆರೋಪಕ್ಕೆ ಪ್ರಲ್ಹಾದ್ ಜೋಶಿ ತಿರುಗೇಟು.!

ನವದೆಹಲಿ: ತಮ್ಮ ಫೋನ್ ಟಾಪ್ ಆಗಿದೆ ಎಂದಿದ್ದ ಯುಪಿಎ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಈ ಆರೋಪ ನಿರಾಧಾರ. ಬಾಲಿಶ ಹೇಳಿಕೆ ನೀಡಬೇಡಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಳ್ವಾ ಆರೋಪವನ್ನು ಅಲ್ಲಗಳೆದಿದ್ದಾರೆ.

ಮಾರ್ಗರೇಟ್ ಆಳ್ವಾ ಅವರ ಫೋನ್ ಅನ್ನು ಯಾಕೆ ಟ್ಯಾಪ್ ಮಾಡಬೇಕು.? ಉಪರಾಷ್ಟ್ರಪತಿ ಚುನಾವಣೆಯಲ್ಲಿ ಫಲಿತಾಂಶ ಏನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ ಅವರ ಫೋನನ್ನು ಟ್ಯಾಪ್ ಮಾಡುವ ಅಗತ್ಯತೆ ನಮಗಿಲ್ಲ. ಅಂಥ ಕೀಳು ಮಟ್ಟದ ರಾಜಕಾರಣವನ್ನ ಬಿಜೆಪಿ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಯುಪಿಎ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ನನ್ನ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ನನಗೆ ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಫೋನ್ ಸರಿಮಾಡಿದರೆ, ಇಂದು ರಾತ್ರಿ ಬಿಜೆಪಿ, ಟಿಎಂಸಿ ಅಥವಾ ಬಿಜೆಡಿಯಿಂದ ಯಾವುದೇ ಸಂಸದರನ್ನು ಕರೆಯುವುದಿಲ್ಲ ಎಂಬ ಭರವಸೆ ನೀಡುತ್ತೇನೆ ಎಂದು ಬಿಜೆಪಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದರು.