ಭಟ್ಕಳ: ಕಳೆದ ಎರಡು ದಿನಗಳಿಂದ ಪಟ್ಟಣದ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಮಾರಿ ಜಾತ್ರೆ ಇಂದು ಸಂಪನ್ನಗೊಂಡಿತು. ಗದ್ದುಗೆ ಏರಿದ ಸುಪ್ರಸಿದ್ದ ಮಾರಿ ದೇವಿ ದರ್ಶನ ಪಡೆಯಲು ಗುರುವಾರ ಹತ್ತು ಸಾವಿರಕ್ಕೂ ಅಧಿಕ ಭಕ್ತಸಮೂಹ ಸೇರಿತ್ತು. ದೇವಸ್ಥಾನದಿಂದ ಜಾಲಿಕೋಡಿ ಸಮುದ್ರ ತೀರದ ತನಕ ಮಾರಿ ಮೂರ್ತಿಯನ್ನು ಹೊತ್ತು ವಿಸರ್ಜಿಸುವ ಮೂಲಕ ಸುಸಂಪನ್ನಗೊಂಡಿತು.
ಕಳೆದ ವರ್ಷ ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಮಾರಿಜಾತ್ರೆಯು ಸರಳವಾಗಿ ಜರುಗಿತ್ತು. ಈ ಬಾರಿ ಹಬ್ಬಕ್ಕೆ ಸಹಸ್ರ ಸಹಸ್ರ ಭಕ್ತರನ್ನೊಳಗೊಂಡಂತೆ ಅದ್ದೂರಿಯಾಗಿ ಸಂಭ್ರಮದಿಂದ ನಡೆಸಲಾಯಿತು.
ಬುಧವಾರ ಮಾರಿಕಾಂಬಾ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡ ಮಾರಿಯಮ್ಮನಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. ಗುರುವಾರ ಮುಂಜಾನೆಯಿಂದಲೇ ಮಾರಿಯಮ್ಮನ ದರ್ಶನಕ್ಕೆ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕು ಜಿಲ್ಲೆಯಿಂದ ಬಂದಂತಹ ಭಕ್ತರು ಸಾಲಿನಲ್ಲಿ ನಿಂತು ಹಣ್ಣು ಕಾಯಿ ಸಮರ್ಪಿಸಿ ಶ್ರಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಭಕ್ತಾದಿಗಳು ದೇವಿಯ ದರ್ಶನ ಹಾಗೂ ಪೂಜೆಯಲ್ಲಿ ಪಾಲ್ಗೊಂಡು ಪುನೀತರಾದರು.

ಎರಡನೇ ದಿನವಾದ ಗುರುವಾರದಂದು ಊರಿನ ಜನ ಹಬ್ಬವನ್ನು ಆಚರಿಸುವ ಸಂಪ್ರದಾಯ ಮೊದಲಿನಿಂದಲೂ ನಡೆದು ಬಂದಿದೆ. ತಾಲೂಕಿನ ವಿವಿಧ ಗ್ರಾಮದ ಜನರು ಮಾರಿ ದೇವಿಗೆ ಮನೆಯಲ್ಲಿಯೇ ಪ್ರಾರ್ಥಿಸಿ ಕೋಳಿ ಬಲಿ ಮಾಡಿ ಹಬ್ಬವನ್ನು ಆಚರಿಸಿದರು.
ಮುಂಜಾನೆ ದೇವಸ್ಥಾನಕ್ಕೆ ಮಾಜಿ ಶಾಸಕ ಮಂಕಾಳ ವೈದ್ಯ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಧ್ಯಾಹ್ನ 4.30 ರ ಸುಮಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಸುನೀಲ ನಾಯ್ಕ, ಆಡಳಿತ ಮಂಡಳಿ ಸದಸ್ಯರು, ಸ್ವಯಂ ಸೇವಕರು ಹಾಗೂ ಭಕ್ತರನ್ನೊಳಗೊಂಡಂತೆ ಮಹಾಮಂಗಳಾರತಿ ಪೂಜೆಯೊಂದಿಗೆ ವಿಸರ್ಜನಾ ಪೂಜೆ ನೆರವೆರಿಸಲಾಯಿತು.

ಮಳೆಯ ಅಡ್ಡಿಯಿಲ್ಲದ ಹಿನ್ನೆಲೆ ಮಾರಿ ದೇವಿಯ ಮೂರ್ತಿಯನ್ನು ಗದ್ದುಗೆಯಿಂದ ಎತ್ತಿಕೊಂಡು ದೇವಸ್ಥಾನದಿಂದ ಹೊರ ತಂದ ಭಕ್ತರು ತಲೆ ಮೇಲೆ ಹೊತ್ತು ಜಯಘೋಷ ಕೂಗುತ್ತ ಮೆರವಣಿಗೆಯಲ್ಲಿ
ಪೇಟೆಯ ಮುಖ್ಯ ರಸ್ತೆ ಮಾರ್ಗವಾಗಿ ಬಂದು ಹನುಮಾನ ನಗರ ಕರಿಕಲ್ ಮಾರ್ಗದಲ್ಲಿ ಸಾಗಿ ಜಾಲಿ ಕೋಡಿ ಸಮುದ್ರ ತೀರದಲ್ಲಿ ವಿಸರ್ಜನೆ ಮಾಡಲಾಯಿತು.
ಇನ್ನು ದಾರಿ ಮಧ್ಯೆ ಇಲ್ಲಿನ ಹನುಮಾನ ನಗರದಿಂದ ಸಮುದ್ರ ತೀರದ ತನಕ ಮನೆಯ ಮಂದಿ ಮಾರಿದೇವಿ ಮೆರವಣಿಗೆ ಸಾಗಿ ಬಂದಾಗ ಊರಿನ ಜನರು ರಸ್ತೆಯ ಪಕ್ಕದಲ್ಲಿ ಕೋಳಿ ಬಲಿ ನೀಡಿ ರೋಗ ರುಜನೆಗಳ ನಿರ್ಮೂಲನೆ ಮಾಡುವಂತೆ ಬೇಡಿಕೊಂಡು ದೇವಿಯ ಹೂವಿನ ಪ್ರಸಾದ ಸ್ವೀಕರಿಸಿದರು.
ಸಂಜೆ ವೇಳೆ 5.30 ರ ವೇಳೆಗೆ ಸಮುದ್ರ ತೀರ ತಲುಪಿದ ಮಾರಿ ದೇವಿ ಮೂರ್ತಿಯನ್ನು ಸ್ವಯಂ ಸೇವಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಜಾಲಿಕೋಡಿ ಸಮುದ್ರ ತೀರಕ್ಕೆ ಕೊಂಡೊಯ್ದು ಅಲ್ಲಿ ಮೂರ್ತಿಯ ಭಾಗಗಳನ್ನು ಬೇರ್ಪಡಿಸಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಸಕಲ ವಿಧಿವಿಧಾನಗಳ ಮೂಲಕ ವಿಸರ್ಜಿಸುವದರೊಂದಿಗೆ ಮಾರಿ ಜಾತ್ರೆ ಸಂಪನ್ನಗೊಂಡಿತ್ತು.
ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ನರೇಂದ್ರ ನಾಯಕ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ನಾರಾಯಣ ಖಾರ್ವಿ ಮಾದೇವ ಮೊಗೇರ, ರಘುವೀರ ಬಾಳಗಿ, ರಾಮನಾಥ ಬಳಗಾರ, ದಿನೇಶ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ ನಾರಾಯಣ ಖಾರ್ವಿ, ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಉಪ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬದರಿನಾಥ, ಡಿವೈಎಸ್ಪಿ ಬೆಳ್ಳಿಯಪ್ಪ, ನೇತೃತ್ವದಲ್ಲಿ ನಗರ ಠಾಣೆ ಸಿಪಿಐ ದಿವಾಕರ ಹಾಗೂ ಗ್ರಾಮೀಣ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಭರತ, ಪಿಎಸ್ಐ ಕುಡಗುಂಟಿ, ಪಿ.ಎಸ್.ಐ ಸುಮಾ ಹಾಗೂ ಇತರ ಪೊಲೀಸರು ಬಿಗಿ ಬಂದೋಬಸ್ತ ಒದಗಿಸಿದ್ದರು.



